ಡಿಜಿಟಲ್ ಆರೆಸ್ಟ್ ಎಂಬ ಕರಾಳ ಕೋಳದಿಂದ ಬಚಾವಾಗೋದು ಹೇಗೆ ಗೊತ್ತಾ?
ಬೆಳಗ್ಗೆ ಬರುವ ಒಂದೇ ಒಂದು ವಿಡಿಯೋ ಕಾಲ್ ನಿಮ್ಮ ಬದುಕನ್ನೇ ಬದಲಿಸಬಹುದು. ಎದುರುಗಡೆ ಪೊಲೀಸ್ ಸಮವಸ್ತ್ರದಲ್ಲಿ ಕಾಣುವ ವ್ಯಕ್ತಿ ನಿಮ್ಮನ್ನು 'ಡಿಜಿಟಲ್ ಅರೆಸ್ಟ್' ಮಾಡಿ, ಕೋಟಿಗಟ್ಟಲೆ ಹಣ ದೋಚುವ ಹೊಸ ದಂಧೆ ಬೆಂಗಳೂರಿನಲ್ಲಿ ವ್ಯಾಪಕವಾಗಿದೆ. ನೆನಪಿಡಿ, ಅಸಲಿ ಪೊಲೀಸರು ಎಂದಿಗೂ ಸ್ಕೈಪ್ ಅಥವಾ ವಾಟ್ಸಾಪ್‌ನಲ್ಲಿ ವಿಚಾರಣೆ ನಡೆಸುವುದಿಲ್ಲ. ನಿಮ್ಮ ಭಯವೇ ಸ್ಕ್ಯಾಮರ್‌ಗಳ ಅಸಲಿ ಬಂಡವಾಳ.
| ರಾಜು ಮೇಲಿನ್ಮನೆ
ಬೆಳಗ್ಗೆ ೯:೩೦ ರ ಸಮಯ. ಬೆಂಗಳೂರಿನ ವೈಟ್‌ಫೀಲ್ಡ್‌ನ ಸುಸಜ್ಜಿತ ಅಪಾರ್ಟ್‌ಮೆಂಟ್ ಒಂದರಲ್ಲಿ ರಮೇಶ್ (ಹೆಸರು ಬದಲಾಯಿಸಲಾಗಿದೆ) ತಮ್ಮ ಲ್ಯಾಪ್‌ಟಾಪ್ ತೆರೆದು ಆಫೀಸ್ ಮೀಟಿಂಗ್‌ಗೆ ತಯಾರಿ ನಡೆಸುತ್ತಿದ್ದರು. ಅಡುಗೆ ಮನೆಯಿಂದ ಕುಕ್ಕರ್ ಸದ್ದು, ಹೊರಗೆ ಟ್ರಾಫಿಕ್ ಗದ್ದಲ, ಎಲ್ಲವೂ ದಿನನಿತ್ಯದಂತೆಯೇ ಇತ್ತು. ಆದರೆ ಆ ಒಂದು ಫೋನ್ ರಿಂಗ್ ಆಗುವವರೆಗೂ ಮಾತ್ರ. ಫೋನ್‌ನ ಡಿಸ್‌ಪ್ಲೇ ಮೇಲೆ ಅಪರಿಚಿತ ನಂಬರ್ . ರಮೇಶ್ ಕಾಲ್ ರಿಸೀವ್ ಮಾಡಿದರು. ಆ ಕಡೆಯಿಂದ ಕೇಳಿಬಂದ ಯಾಂತ್ರಿಕ ಧ್ವನಿ, "ಫೆಡೆಕ್ಸ್ ಕೊರಿಯರ್ ನಿಂದ ಕರೆ ಮಾಡುತ್ತಿದ್ದೇವೆ, ನಿಮ್ಮ ಪಾರ್ಸೆಲ್ ಸೀಜ್ ಆಗಿದೆ" ಎಂದು ಹೇಳಿತು. ರಮೇಶ್ ನಕ್ಕು ಸುಮ್ಮನಾದರು. "ನಾನು ಯಾವ ಪಾರ್ಸೆಲ್ ಕಳಿಸಿಲ್ಲ" ಎಂದು ಹೇಳಿ ಫೋನ್ ಇಡುವಷ್ಟರಲ್ಲಿ, ಆ ಕಡೆಯ ಧ್ವನಿ ಗಂಭೀರವಾಯಿತು. "ಸರ್, ಇದು ಸಾಮಾನ್ಯ ಪಾರ್ಸೆಲ್ ಅಲ್ಲ. ತೈವಾನ್ ಗೆ ಹೋಗುತ್ತಿದ್ದ ಈ ಪಾರ್ಸೆಲ್ ನಲ್ಲಿ ನಿಮ್ಮ ಆಧಾರ್ ಕಾರ್ಡ್, ಐದು ನಕಲಿ ಪಾಸ್‌ಪೋರ್ಟ್, ಮೂರು ಕ್ರೆಡಿಟ್ ಕಾರ್ಡ್ ಮತ್ತು ೨೦೦ ಗ್ರಾಂ ಎಂಡಿಎಂಎ ಡ್ರಗ್ಸ್ ಇದೆ. ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಈಗ ನಿಮ್ಮೊಂದಿಗೆ ಮಾತನಾಡಲಿದ್ದಾರೆ" ಎಂದು ಕಾಲ್ ಟ್ರಾನ್ಸ್‌ಫರ್ ಆಯ್ತು.
ಅಲ್ಲಿಯವರೆಗೂ ಒಬ್ಬ ಸಾಮಾನ್ಯ ಐಟಿ ಉದ್ಯೋಗಿಯಾಗಿದ್ದ ರಮೇಶ್, ಮರುಕ್ಷಣವೇ ಅಂತರರಾಷ್ಟ್ರೀಯ ಡ್ರಗ್ಸ್ ದಂಧೆಯ ಆರೋಪಿಯಾಗಿಬಿಟ್ಟರು! ಫೋನ್‌ನಲ್ಲಿ ಮಾತನಾಡಿದ 'ಅಧಿಕಾರಿ' ಅಬ್ಬರಿಸಿದ ಪರಿ, ರಮೇಶ್ ಅವರ ಎದೆಯಲ್ಲಿ ನಡುಕ ಹುಟ್ಟಿಸಿತು. "ನಿಮ್ಮ ಆಧಾರ್ ಕಾರ್ಡ್ ಬಳಸಿ ಭಯೋತ್ಪಾದಕರಿಗೆ ಸಿಮ್ ಕಾರ್ಡ್ ನೀಡಲಾಗಿದೆ. ಮನಿ ಲಾಂಡರಿಂಗ್ ಆಗಿದೆ. ಈಗಲೇ ವಿಡಿಯೋ ಕಾಲ್ ಆನ್ ಮಾಡಿ, ಇಲ್ಲದಿದ್ದರೆ ಮುಂದಿನ ಅರ್ಧ ಗಂಟೆಯಲ್ಲಿ ಬೆಂಗಳೂರು ಪೊಲೀಸ್ ನಿಮ್ಮ ಮನೆ ಬಾಗಿಲಿಗೆ ಬಂದು ಅರೆಸ್ಟ್ ಮಾಡುತ್ತಾರೆ" ಎಂಬ ಬೆದರಿಕೆ ಬಂತು. ಹೆದರಿದ ರಮೇಶ್ ಸ್ಕೈಪ್ ಆಪ್ ಡೌನ್ಲೋಡ್ ಮಾಡಿ ವಿಡಿಯೋ ಕಾಲ್ ಆನ್ ಮಾಡಿದರು.
ಸ್ಕ್ರೀನ್ ಮೇಲೆ ಕಂಡ ದೃಶ್ಯ ರಮೇಶ್ ಅವರನ್ನು ಸಂಪೂರ್ಣವಾಗಿ ನಂಬಿಸಿಬಿಟ್ಟಿತು. ಎದುರುಗಡೆ ಖಾಕಿ ಸಮವಸ್ತ್ರ ಧರಿಸಿದ ಹಿರಿಯ ಅಧಿಕಾರಿ, ಹಿಂದೆ ಪೊಲೀಸ್ ಸ್ಟೇಷನ್ ಬೋರ್ಡ್, ಟೇಬಲ್ ಮೇಲೆ ರಾಷ್ಟ್ರಧ್ವಜ, ಹಿಂದೆ ವೈರ್‌ಲೆಸ್ ಸೆಟ್‌ನ ಸದ್ದುಗಳು. ನೋಡಲು ಅಪ್ಪಟ ಪೊಲೀಸ್ ಠಾಣೆಯಂತೆಯೇ ಇದ್ದ ಆ ಸೆಟಪ್, ರಮೇಶ್ ಅವರನ್ನು ಮಾನಸಿಕವಾಗಿ ಕಟ್ಟಿಹಾಕಿತ್ತು. ಆ ನಕಲಿ ಅಧಿಕಾರಿ, "ಇದು ರಾಷ್ಟ್ರೀಯ ಭದ್ರತೆಯ ವಿಷಯ. ತನಿಖೆ ಮುಗಿಯುವವರೆಗೂ ನೀವು ಈ ವಿಡಿಯೋ ಕಾಲ್ ಕಟ್ ಮಾಡುವಂತಿಲ್ಲ. ನಿಮ್ಮ ಮನೆಯಿಂದ ಹೊರಗೆ ಹೋಗುವಂತಿಲ್ಲ. ಯಾರಿಗೂ ಫೋನ್ ಮಾಡುವಂತಿಲ್ಲ. ನೀವು 'ಡಿಜಿಟಲ್ ಅರೆಸ್ಟ್' ಆಗಿದ್ದೀರಿ" ಎಂದು ಘೋಷಿಸಿದ.
ಅಲ್ಲಿಗೆ ರಮೇಶ್ ಅವರ ಸ್ವಾತಂತ್ರ್ಯ ಹರಣವಾಗಿತ್ತು. ಸ್ವಂತ ಮನೆಯಲ್ಲೇ ಅವರು ಕೈದಿಯಾದರು. ಮುಂದಿನ ೪೮ ಗಂಟೆಗಳ ಕಾಲ ಆ ನಕಲಿ ಅಧಿಕಾರಿಗಳು ರಮೇಶ್ ಅವರನ್ನು ಒಂದು ಕ್ಷಣವೂ ಕಣ್ಣು ತಪ್ಪಿಸಲು ಬಿಡಲಿಲ್ಲ. ರಮೇಶ್ ಊಟ ಮಾಡುವಾಗಲೂ ಕ್ಯಾಮೆರಾ ಆನ್ ಇರಬೇಕಿತ್ತು. ಅಷ್ಟೇ ಏಕೆ, ಬಾತ್‌ರೂಮ್‌ಗೆ ಹೋಗುವಾಗಲೂ ಫೋನ್ ಕ್ಯಾಮೆರಾ ಆನ್ ಇಟ್ಟು, ಬಾಗಿಲು ಅರ್ಧ ತೆಗೆದಿಟ್ಟು ಹೋಗುವಂತೆ ಆದೇಶಿಸಲಾಯಿತು. ಒಬ್ಬ ಸುಶಿಕ್ಷಿತ ವ್ಯಕ್ತಿಯ ಆತ್ಮಗೌರವವನ್ನು ಎಷ್ಟರಮಟ್ಟಿಗೆ ಕುಗ್ಗಿಸಬಹುದೆಂದರೆ, ರಮೇಶ್ ಆ ಅವಮಾನವನ್ನೂ ಸಹಿಸಿಕೊಂಡರು. ಕಾರಣ ಒಂದೇ- ಜೈಲು ಸೇರುವ ಭಯ.
ಇದು ಕೇವಲ ರಮೇಶ್ ಅವರ ಕಥೆಯಲ್ಲ. ಡಿಜಿಟಲ್ ಇಂಡಿಯಾ ವ್ಯಾಪಕವಾದ ಬಳಿಕ ಹೆಚ್ಚೆಚ್ಚು ಕಂಡುಬರುತ್ತಿರುವ ಕರಾಳ ಮುಖವಿದು. ಇದನ್ನು ನಾವು 'ಡಿಜಿಟಲ್ ಅರೆಸ್ಟ್' ಎಂದು ಕರೆಯುತ್ತೇವೆ. ಇಲ್ಲಿ ಪೊಲೀಸ್ ಜೀಪ್ ಬರುವುದಿಲ್ಲ, ಕೈಗೆ ಕೋಳ ತೊಡಿಸುವುದಿಲ್ಲ. ಆದರೆ ನಿಮ್ಮ ಮನಸ್ಸಿಗೆ ಭಯದ ಕೋಳ ತೊಡಿಸಿ, ನಿಮ್ಮ ಬೆಡ್‌ರೂಮ್ ಅನ್ನೇ ಜೈಲನ್ನಾಗಿ ಮಾಡುತ್ತಾರೆ. ಈ ಸ್ಕ್ಯಾಮ್‌ಗೆ ಬಲಿಯಾಗುತ್ತಿರುವವರು ಹಳ್ಳಿಯ ಅಮಾಯಕರಲ್ಲ. ಐಐಟಿ ಪದವೀಧರರು, ನಿವೃತ್ತ ಐಎಎಸ್ ಅಧಿಕಾರಿಗಳು, ವೈದ್ಯರು ಮತ್ತು ಹೈಕೋರ್ಟ್ ವಕೀಲರೇ ಇದರ ಪ್ರಮುಖ ಟಾರ್ಗೆಟ್.
ಪ್ರಾಣ ಭಯಕ್ಕಿಂತ 'ಅವಮಾನ'ದ ಭಯ ಬುಟ್ಟಿಸುತ್ತಾರೆ!
ಈ ದಂಧೆಯ ಹಿಂದಿರುವ ಮನಃಶಾಸ್ತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮನುಷ್ಯನಿಗೆ ಪ್ರಾಣ ಭಯಕ್ಕಿಂತ 'ಅವಮಾನ'ದ ಭಯ ಹೆಚ್ಚು. "ನನ್ನ ಹೆಸರಿನಲ್ಲಿ ಡ್ರಗ್ಸ್ ಸಿಕ್ಕಿದೆ, ಟಿವಿ ಚಾನೆಲ್‌ನಲ್ಲಿ ನ್ಯೂಸ್ ಬಂದರೆ ನನ್ನ ಮರ್ಯಾದೆ ಏನು ಗತಿ? ಸಮಾಜದಲ್ಲಿ ನನ್ನ ಸ್ಥಾನಮಾನ ಏನಾಗಬೇಕು?" ಎಂಬ ಒಂದೇ ಒಂದು ಆಲೋಚನೆ, ಮನುಷ್ಯನ ತರ್ಕಬದ್ಧ ಆಲೋಚನಾ ಶಕ್ತಿಯನ್ನು (Logical Thinking) ನಾಶ ಮಾಡುತ್ತದೆ. ಸ್ಕ್ಯಾಮರ್‌ಗಳು ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ. ಅವರು ನಿಮಗೆ ಯೋಚಿಸಲು ಸಮಯ ಕೊಡುವುದಿಲ್ಲ. ಒಂದರ ಮೇಲೊಂದು ಬೆದರಿಕೆ ಹಾಕುತ್ತಾ, ನಿಮ್ಮ ಮೆದುಳನ್ನು ಹೈಜಾಕ್ ಮಾಡುತ್ತಾರೆ.
ವಿಡಿಯೋ ಕಾಲ್‌ನಲ್ಲಿ ಕಾಣುವ ಆ ಪೊಲೀಸ್ ಠಾಣೆ ಅಸಲಿಗೆ ಒಂದು 'ಸ್ಟುಡಿಯೋ'. ಕಾಂಬೋಡಿಯಾ, ಮ್ಯಾನ್ಮಾರ್ ಅಥವಾ ಲಾವೋಸ್ ದೇಶದ ಯಾವುದೋ ಒಂದು ಮೂಲೆಯಲ್ಲಿ ದೊಡ್ಡ ಹಾಲಿನಲ್ಲಿ ನೂರಾರು ಜನ ಕುಳಿತಿರುತ್ತಾರೆ. ಅಲ್ಲಿ ಸಿನಿಮಾದ ಶೂಟಿಂಗ್ ಸೆಟ್ ತರಹ ಪೊಲೀಸ್ ಠಾಣೆಯ ಸೆಟ್ ಹಾಕಿರುತ್ತಾರೆ. ಭಾರತೀಯ ಪೊಲೀಸ್ ಸಮವಸ್ತ್ರಗಳು ಅಲ್ಲಿ ಬಾಡಿಗೆಗೆ ಸಿಗುತ್ತವೆ. ನಮ್ಮ ದೇಶದವರೇ ಆದ, ಕೆಲಸ ಅರಿಸಿ ಹೋಗಿ ಅಲ್ಲಿ ಸಿಕ್ಕಿಹಾಕಿಕೊಂಡಿರುವ ಯುವಕರನ್ನು ಬಳಸಿಕೊಂಡು ಈ ನಾಟಕ ಆಡಿಸಲಾಗುತ್ತದೆ. ಅವರ ಹಿಂದಿನ ಪರದೆಯ ಮೇಲೆ ಸಿಬಿಐ ಲೋಗೋ ಅಥವಾ ಪೊಲೀಸ್ ಠಾಣೆಯ ಫೋಟೋ ಇರುತ್ತದೆ.
ಈ ನಾಟಕದ ಕ್ಲೈಮ್ಯಾಕ್ಸ್ ಬರುವುದೇ ಹಣದ ವಿಚಾರ ಬಂದಾಗ. "ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಅಕ್ರಮ ಹಣವಿರಬಹುದು. ಹಾಗಾಗಿ ಆರ್‌ಬಿಐ ನಿಯಮದ ಪ್ರಕಾರ, ನಿಮ್ಮ ಎಲ್ಲಾ ಹಣವನ್ನು ನಾವು ಕೊಡುವ 'ಪರಿಶೀಲನಾ ಖಾತೆಗೆ' (Verification Account) ವರ್ಗಾಯಿಸಬೇಕು. ನಾವು ತನಿಖೆ ಮಾಡಿ, ಅದು ವೈಟ್ ಮನಿ ಎಂದು ಗೊತ್ತಾದ ತಕ್ಷಣ ೧೫ ನಿಮಿಷದಲ್ಲಿ ವಾಪಸ್ ಕಳಿಸುತ್ತೇವೆ" ಎಂದು ಹೇಳುತ್ತಾರೆ. ಜೀವ ಭಯದಲ್ಲಿರುವ ಸಂತ್ರಸ್ತರು, ತಮ್ಮ ಫಿಕ್ಸೆಡ್ ಡೆಪಾಸಿಟ್ ಮುರಿದು, ಮ್ಯೂಚುವಲ್ ಫಂಡ್ ಮಾರಿ, ಕೆಲವೊಮ್ಮೆ ಚಿನ್ನ ಅಡವಿಟ್ಟು ಹಣವನ್ನು ಆ ಖಾತೆಗೆ ಹಾಕುತ್ತಾರೆ.
ಹಣ ವರ್ಗಾವಣೆಯಾದ ಮರುಕ್ಷಣವೇ, ಆ ಕಡೆಯಿಂದ "ತನಿಖೆ ಪೂರ್ಣವಾಗಿದೆ, ನೀವು ಕಾಲ್ ಕಟ್ ಮಾಡಬಹುದು" ಎಂಬ ಮಾತು ಬರುತ್ತದೆ. ಕಾಲ್ ಕಟ್ ಆಗುತ್ತದೆ. ರಮೇಶ್ ನಿಟ್ಟುಸಿರು ಬಿಡುತ್ತಾರೆ. ೧೫ ನಿಮಿಷ ಕಾಯುತ್ತಾರೆ. ಅರ್ಧ ಗಂಟೆ, ಒಂದು ಗಂಟೆ, ಒಂದು ದಿನ ಕಳೆಯುತ್ತದೆ. ಹಣ ವಾಪಸ್ ಬರುವುದಿಲ್ಲ. ಆ ನಂಬರ್ ಸ್ವಿಚ್ ಆಫ್ ಆಗಿರುತ್ತದೆ. ಆಗ ರಮೇಶ್ ಅವರಿಗೆ ಅರಿವಾಗುತ್ತದೆ, ತಾವು ಕಳೆದುಕೊಂಡಿದ್ದು ಕೇವಲ ಹಣವನ್ನಲ್ಲ, ತಮ್ಮ ಜೀವನದ ಇಡೀ ಸಂಪಾದನೆಯನ್ನು ಎಂದು.
ಬೆಂಗಳೂರು ನಗರವೊಂದರಲ್ಲೇ ಕಳೆದ ವರ್ಷ ಈ ರೀತಿಯ ಪ್ರಕರಣಗಳಲ್ಲಿ ಕಳೆದುಹೋದ ಹಣದ ಮೊತ್ತ ೧೫೦೦ ಕೋಟಿಗೂ ಅಧಿಕ! ಇಂದಿರಾನಗರದ ಮಹಿಳೆಯೊಬ್ಬರು ಬರೋಬ್ಬರಿ ೩೧ ಕೋಟಿ ಕಳೆದುಕೊಂಡ ಪ್ರಕರಣ ಕೇಳಿದರೆ ಎಂಥವರ ಎದೆಯೂ ಝಲ್ ಎನ್ನುತ್ತದೆ. ಅವರು ಆರು ದಿನಗಳ ಕಾಲ ಡಿಜಿಟಲ್ ಅರೆಸ್ಟ್‌ನಲ್ಲಿದ್ದರು. ಗಂಡನಿಗೂ ಹೇಳದಂತೆ, ಮಕ್ಕಳಿಗೂ ಹೇಳದಂತೆ ಅವರನ್ನು ಬೆದರಿಸಲಾಗಿತ್ತು. ಇದು ಕೇವಲ ಆರ್ಥಿಕ ಅಪರಾಧವಲ್ಲ, ಇದೊಂದು ಮಾನಸಿಕ ಅತ್ಯಾಚಾರ.

ವೀಡಿಯೋ ಕಾಲ್‌ನಲ್ಲಿ ವಿಚಾರಣೆ ಪದ್ಧತಿಯೇ ಇಲ್ಲ!
ಇಲ್ಲಿ ನಾವು ಗಮನಿಸಬೇಕಾದ ಕಾನೂನು ಅಂಶ ಒಂದಿದೆ. ಭಾರತದ ದಂಡ ಸಂಹಿತೆಯ ಪ್ರಕಾರ, ಅಥವಾ ಯಾವುದೇ ತನಿಖಾ ಸಂಸ್ಥೆಯ ನಿಯಮಾವಳಿ ಪ್ರಕಾರ, ವಿಡಿಯೋ ಕಾಲ್ ಮೂಲಕ ಆರೋಪಿಯನ್ನು ವಿಚಾರಣೆ ನಡೆಸುವ ಪದ್ಧತಿಯೇ ಇಲ್ಲ. ಪೊಲೀಸ್ ನಿಮ್ಮನ್ನು ಅರೆಸ್ಟ್ ಮಾಡಬೇಕೆಂದರೆ, ಸಮವಸ್ತ್ರ ಧರಿಸಿ, ಐಡಿ ಕಾರ್ಡ್ ತೋರಿಸಿ, ವಾರೆಂಟ್ ಹಿಡಿದು ನಿಮ್ಮ ಮನೆಗೇ ಬರಬೇಕು. ಸ್ಕೈಪ್ ಅಥವಾ ವಾಟ್ಸಾಪ್‌ನಲ್ಲಿ ಆಧಾರ್ ಕಾರ್ಡ್ ತೋರಿಸಿ ಯಾರನ್ನೂ ಅರೆಸ್ಟ್ ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಕೂಡ ಇದನ್ನು ಸ್ಪಷ್ಟಪಡಿಸಿದೆ.
ಹಾಗಾದರೆ ಜನ ಯಾಕೆ ನಂಬುತ್ತಾರೆ? ಉತ್ತರ ಸರಳ- ಅಧಿಕಾರ ಮತ್ತು ಸಮವಸ್ತ್ರದ ಮೇಲಿರುವ ಕುರುಡು ಭಯ. ನಕಲಿ ಪೊಲೀಸರು ತೋರಿಸುವ ಐಡಿ ಕಾರ್ಡ್, ಅವರು ಬಳಸುವ ಕಾನೂನು ಪದಗಳು (Legal Jargon), ಮತ್ತು ಅವರು ಸೃಷ್ಟಿಸುವ ಕೃತಕ ತುರ್ತು ಪರಿಸ್ಥಿತಿ ಎದುರಿಗಿರುವವರನ್ನು ಮೂರ್ಖರನ್ನಾಗಿಸುತ್ತದೆ. "ಇದು ರಾಷ್ಟ್ರೀಯ ರಹಸ್ಯ, ನೀವು ಬಾಯ್ಬಿಟ್ಟರೆ ದೇಶದ್ರೋಹದ ಕೇಸ್ ಹಾಕುತ್ತೇವೆ" ಎಂದರೆ ಎಂಥವರೂ ಮೌನವಾಗುತ್ತಾರೆ.
ತಂತ್ರ - ಜ್ಞಾನಕ್ಕಿಂತ ಸಾಮಾನ್ಯ ಜ್ಞಾನ ಮುಖ್ಯ!
ಈ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳಲು ತಂತ್ರಜ್ಞಾನದ ಜ್ಞಾನಕ್ಕಿಂತ ಹೆಚ್ಚಾಗಿ, ಸಾಮಾನ್ಯ ಜ್ಞಾನ (Common Sense) ಮುಖ್ಯವಾಗುತ್ತದೆ. ನಿಜವಾದ ಸಿಬಿಐ ಅಧಿಕಾರಿ ಅಥವಾ ಕ್ರೈಂ ಬ್ರಾಂಚ್ ಅಧಿಕಾರಿ ನಿಮ್ಮ ಜೊತೆ ಗಂಟೆಗಟ್ಟಲೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವಷ್ಟು ಪುರುಸೊತ್ತಿಲ್ಲದವರು. ಅವರು ನೇರವಾಗಿ ಕಾರ್ಯಾಚರಣೆಗೆ ಇಳಿಯುತ್ತಾರೆ. ಅಕಸ್ಮಾತ್ ನಿಮಗೆ ಇಂತಹ ಕರೆ ಬಂದರೆ, ಎದುರುಗಡೆ ಇರೋದು ಪೊಲೀಸ್ ಕಮಿಷನರ್ ಎಂದು ಹೇಳಿಕೊಂಡರೂ ಸರಿ, ಒಂದು ಪ್ರಶ್ನೆ ಕೇಳಿ- "ಸರ್, ನಾನು ಯಾವ ಸ್ಟೇಷನ್‌ಗೆ ಬರಬೇಕು ಹೇಳಿ, ನಾನೇ ಅಲ್ಲಿಗೆ ಬರುತ್ತೇನೆ." ಈ ಒಂದು ಮಾತು ಸಾಕು, ಅವರ ಬಣ್ಣ ಬಯಲಾಗಲು. ಅವರು ನಿಮ್ಮ ಆಧಾರ್ ಕಾರ್ಡ್ ನಂಬರ್ ಹೇಳಿದರು ಎಂದ ಮಾತ್ರಕ್ಕೆ ಅವರು ಪೊಲೀಸರಲ್ಲ. ಇಂದು ನಮ್ಮ ಆಧಾರ್ ಡೇಟಾ ಡಾರ್ಕ್ ವೆಬ್‌ನಲ್ಲಿ ಬಟಾಟೆಯಂತೆ ಮಾರಾಟವಾಗುತ್ತಿದೆ. ನಿಮ್ಮ ಹೆಸರು, ವಿಳಾಸ, ಪ್ಯಾನ್ ಕಾರ್ಡ್ ಎಲ್ಲವೂ ಅವರಿಗೆ ಮೊದಲೇ ಗೊತ್ತಿರುತ್ತದೆ. ಅದನ್ನೇ ಬಳಸಿ ಅವರು ನಿಮ್ಮನ್ನು ನಂಬಿಸುತ್ತಾರೆ.
ಇನ್ನೊಂದು ಮುಖ್ಯ ವಿಷಯ, ಸರ್ಕಾರಿ ಸಂಸ್ಥೆಗಳು ಯಾವತ್ತೂ ಸ್ಕೈಪ್, ವಾಟ್ಸಾಪ್ ಅಥವಾ ಟೆಲಿಗ್ರಾಮ್ ಮೂಲಕ ಅಧಿಕೃತ ವ್ಯವಹಾರ ನಡೆಸುವುದಿಲ್ಲ. ಅವರು ಹಣ ವರ್ಗಾಯಿಸಲು ಯಾವತ್ತೂ ಪರ್ಸನಲ್ ಅಕೌಂಟ್ ನಂಬರ್ ಕೊಡುವುದಿಲ್ಲ. 'ಆರ್‌ಬಿಐ ಸೇಫ್ ಲಾಕರ್' ಅಂತ ಯಾವುದೇ ಖಾತೆ ಇರುವುದಿಲ್ಲ. ಯಾರಾದರೂ ಹಣ ಕೇಳಿದರು ಎಂದರೆ, ಅದು ೧೦೦% ಸ್ಕ್ಯಾಮ್ ಎಂದು ಅರ್ಥ.
ಹಾಗಾದರೆ ನಾವೇನು ಮಾಡಬೇಕು? ಇಂದೇ ನಿಮ್ಮ ತಂದೆ-ತಾಯಿ, ಪತ್ನಿ ಮತ್ತು ಮಕ್ಕಳಿಗೆ ಈ 'ಡಿಜಿಟಲ್ ಅರೆಸ್ಟ್' ಬಗ್ಗೆ ವಿವರಿಸಿ. "ಯಾರೇ ಪೊಲೀಸ್ ಅಂತ ಫೋನ್ ಮಾಡಿದ್ರೂ ಹೆದರಬೇಡಿ, ಮೊದಲು ಫೋನ್ ಕಟ್ ಮಾಡಿ ನನಗೆ ಹೇಳಿ" ಎಂಬ ಭರವಸೆ ಕೊಡಿ. ಯಾಕೆಂದರೆ ಈ ಸ್ಕ್ಯಾಮರ್‌ಗಳು ಒಂಟಿಯಾಗಿರುವವರನ್ನು, ನಿವೃತ್ತರಾದವರನ್ನು ಮತ್ತು ಮನೆಯಲ್ಲಿರುವ ಮಹಿಳೆಯರನ್ನು ಹೆಚ್ಚು ಟಾರ್ಗೆಟ್ ಮಾಡುತ್ತಿದ್ದಾರೆ.

ಒಂದು ವೇಳೆ ಇಂತಹ ಕರೆ ಬಂದರೆ, ತಕ್ಷಣ ೧೯೩೦ (ಸೈಬರ್ ಕ್ರೈಂ ಹೆಲ್ಪ್‌ಲೈನ್) ಗೆ ಕರೆ ಮಾಡಿ. ಮೊದಲ ಒಂದು ಗಂಟೆ 'ಗೋಲ್ಡನ್ ಅವರ್' ಆಗಿರುತ್ತದೆ. ಈ ಸಮಯದಲ್ಲಿ ದೂರು ನೀಡಿದರೆ ಹಣ ವಾಪಸ್ ಪಡೆಯುವ ಸಾಧ್ಯತೆ ಹೆಚ್ಚು. ಭಯಪಡಬೇಡಿ, ಪ್ರಶ್ನಿಸಿ. ನಿಮ್ಮ ಫೋನ್‌ನ ಕ್ಯಾಮೆರಾ ನಿಮ್ಮನ್ನು ನೋಡುತ್ತಿರುವ ಕಣ್ಣಾಗದಿರಲಿ, ಅದು ನಿಮ್ಮ ಜಗತ್ತನ್ನು ನೋಡುವ ಕಿಟಕಿಯಾಗಲಿ.
ನೆನಪಿಡಿ, ಡಿಜಿಟಲ್ ಜಗತ್ತಿನಲ್ಲಿ ಅಪರಿಚಿತ ಕರೆಗಳನ್ನು ನಂಬುವುದೆಂದರೆ, ಅಪರಿಚಿತನ ಕೈಗೆ ನಮ್ಮ ಮನೆಯ ಕೀಲಿ ಕೈ ಕೊಟ್ಟಂತೆ. ಎಚ್ಚರ ತಪ್ಪಿದರೆ, ಮುಂದಿನ 'ಡಿಜಿಟಲ್ ಅರೆಸ್ಟ್' ಬಲಿಪಶು ನೀವಾಗಬಹುದು. ಜಾಗೃತರಾಗಿರಿ, ಸುರಕ್ಷಿತವಾಗಿರಿ. ಇದು ಟೆಕ್‌ವೈದ್ಯನ ಕಾಳಜಿ.

ಎಐ ಭಗವದ್ಗೀತೆ ಪುಸ್ತಕವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಸಮಯೋಚಿತ ಲೇಖನ
ಪ್ರತಿಯೊಬ್ಬನೂ ಜಾಗೃತನಾಗಿರಬೇಕಾದ ಸಮಯ ಎಂಬುದನ್ನು ಸರಳ ಸುಂದರವಾಗಿ ವಿವರಿಸಿದ್ದೀರಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.