ಟ್ರೆಂಡಿಂಗ್

518 ಕೋಟಿಯಲ್ಲಿ 25,000 ಹೊಸ ಸ್ಟಾರ್ಟಪ್ ಗುರಿ:  ಕರ್ನಾಟಕದ ನೂತನ ಸ್ಟಾರ್ಟಪ್ ನೀತಿ ಜಾರಿ ಯಾರಿಗೆ ಲಾಭ? ಸವಾಲುಗಳೇನು?

518 ಕೋಟಿಯಲ್ಲಿ 25,000 ಹೊಸ ಸ್ಟಾರ್ಟಪ್ ಗುರಿ: ಕರ್ನಾಟಕದ ನೂತನ ಸ್ಟಾರ್ಟಪ್ ನೀತಿ ಜಾರಿ ಯಾರಿಗೆ ಲಾಭ? ಸವಾಲುಗಳೇನು?

ಭಾರತದ ಸ್ಟಾರ್ಟಪ್ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ತನ್ನ ಸ್ಥಾನವನ್ನು ಕಾಯ್ದುಕೊಳ್ಳುವ ಜೊತೆಗೆ, ರಾಜ್ಯದ ಇತರೆ ಭಾಗಗಳಿಗೂ ತಂತ್ರಜ್ಞಾನದ ಅಲೆ ಹಬ್ಬಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ನವೆಂಬರ್‌ನಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದಿದ್ದ ಬಹುನಿರೀಕ್ಷಿತ 'ಕರ್ನಾಟಕ ಸ್ಟಾರ್ಟಪ್ ನೀತಿ 2025-2030' ಕ್ಕೆ ಜನವರಿ 17 ರಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ನೀತಿಯನ್ನು ಲೋಕಾರ್ಪಣೆ ಮಾಡಿದ್ದು, ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಸ್ಟಾರ್ಟಪ್ ಚಿತ್ರಣವನ್ನೇ ಬದಲಿಸುವ ಮಹತ್ವಾಕಾಂಕ್ಷೆಯನ್ನು ಇದು ಹೊಂದಿದೆ.

ಈ ಹೊಸ ನೀತಿಯ ಅಡಿಯಲ್ಲಿ ಸರ್ಕಾರವು ಬರೋಬ್ಬರಿ 518 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇದರ ಪ್ರಮುಖ ಉದ್ದೇಶವೆಂದರೆ ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 25,000 ಹೊಸ ಸ್ಟಾರ್ಟಪ್‌ಗಳನ್ನು ಹುಟ್ಟುಹಾಕುವುದು. ಇದರಲ್ಲಿ ಗಮನಾರ್ಹ ಅಂಶವೆಂದರೆ, ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಐಟಿ ಬೆಳವಣಿಗೆಯನ್ನು ವಿಕೇಂದ್ರೀಕರಣಗೊಳಿಸುವುದು. ಈ 25,000 ಸ್ಟಾರ್ಟಪ್‌ಗಳ ಪೈಕಿ ಕನಿಷ್ಠ 10,000 ಸ್ಟಾರ್ಟಪ್‌ಗಳು ಬೆಂಗಳೂರಿನ ಆಚೆಗಿನ ನಗರಗಳಲ್ಲಿ (Tier-2 ಮತ್ತು Tier-3 ನಗರಗಳಲ್ಲಿ) ಸ್ಥಾಪನೆಯಾಗಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ 'ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್' ಅಡಿಯಲ್ಲಿ 75 ಕೋಟಿ ರೂ. ಮತ್ತು ಡೀಪ್-ಟೆಕ್ ಸ್ಟಾರ್ಟಪ್‌ಗಳಿಗಾಗಿ 'ಎಲಿವೇಟ್ ನೆಕ್ಸ್ಟ್' (Elevate NxT) ಅಡಿಯಲ್ಲಿ 150 ಕೋಟಿ ರೂ. ಗಳನ್ನು ಘೋಷಿಸಲಾಗಿದೆ.

ಈ ನೀತಿಯಿಂದ ಆಗುವ ಪ್ರಮುಖ ಲಾಭಗಳ ವಿಶ್ಲೇಷಣೆ:

ಮೊದಲನೆಯದಾಗಿ, ಈ ನೀತಿಯು 'ಬೆಂಗಳೂರು ಕೇಂದ್ರಿತ' ಮನಸ್ಥಿತಿಯಿಂದ ಹೊರಬಂದಿರುವುದು ಸ್ವಾಗತಾರ್ಹ. ಬೆಂಗಳೂರು ಈಗಾಗಲೇ ಮೂಲಸೌಕರ್ಯದ ಒತ್ತಡದಲ್ಲಿ ನರಳುತ್ತಿದೆ. ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನಂತಹ ನಗರಗಳಲ್ಲಿ ಸ್ಟಾರ್ಟಪ್‌ಗಳಿಗೆ 75 ಕೋಟಿ ರೂ.ಗಳ ವಿಶೇಷ ನಿಧಿ ಘೋಷಿಸಿರುವುದು ಆ ಭಾಗದ ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ವರದಾನವಾಗಲಿದೆ. ಇದರಿಂದ ಉದ್ಯೋಗ ಅರಸಿ ರಾಜಧಾನಿಗೆ ವಲಸೆ ಬರುವುದು ತಪ್ಪುತ್ತದೆ ಮತ್ತು ಸ್ಥಳೀಯ ಆರ್ಥಿಕತೆ ಬಲಗೊಳ್ಳುತ್ತದೆ.

ಎರಡನೆಯದಾಗಿ, ಸರ್ಕಾರವು ಸಾಮಾನ್ಯ ಆಪ್ ಆಧಾರಿತ ಸ್ಟಾರ್ಟಪ್‌ಗಳಿಗಿಂತ ಹೆಚ್ಚಾಗಿ 'ಡೀಪ್ ಟೆಕ್' (Deep Tech) ಕಡೆಗೆ ಗಮನಹರಿಸಿರುವುದು ಉತ್ತಮ ಬೆಳವಣಿಗೆ. ಎಐ (AI), ಬ್ಲಾಕ್‌ಚೈನ್, ಕ್ವಾಂಟಮ್ ಕಂಪ್ಯೂಟಿಂಗ್, ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಂತಹ ಕ್ಷೇತ್ರಗಳು ಭವಿಷ್ಯದ ಜಗತ್ತನ್ನು ಆಳಲಿವೆ. ಇವುಗಳಿಗೆ ಆರಂಭಿಕ ಹಂತದಲ್ಲಿ ಹೆಚ್ಚಿನ ಬಂಡವಾಳ ಬೇಕಾಗುತ್ತದೆ. 'ಎಲಿವೇಟ್ ನೆಕ್ಸ್ಟ್' ಯೋಜನೆಯಡಿ ಇವುಗಳಿಗೆ ಆರ್ಥಿಕ ಬೆಂಬಲ ನೀಡುತ್ತಿರುವುದು ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲದು.

ಮೂರನೆಯದಾಗಿ, ವೆಂಚರ್ ಕ್ಯಾಪಿಟಲ್ (VC) ಫಂಡಿಂಗ್ ಸಿಗುವುದು ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ, ಸರ್ಕಾರದ ಸೀಡ್ ಫಂಡ್ (Seed Fund) ಆರಂಭಿಕ ಹಂತದ ಕಂಪನಿಗಳಿಗೆ ಜೀವಾಮೃತವಿದ್ದಂತೆ. ಐಡಿಯಾ ಇದ್ದರೂ ಹಣವಿಲ್ಲದೆ ಸೊರಗುವ ನವೋದ್ಯಮಿಗಳಿಗೆ ಇದು ಧೈರ್ಯ ತುಂಬಲಿದೆ.

ಆದರೆ, ನಾಣ್ಯಕ್ಕೆ ಇನ್ನೊಂದು ಮುಖವೂ ಇದೆ. ಈ ನೀತಿಯಲ್ಲಿರುವ ನೆಗೆಟಿವ್ ಅಥವಾ ಸವಾಲಿನ ಅಂಶಗಳೂ ಸಾಕಷ್ಟಿವೆ. ಅವರುಗಳನ್ನು ನಾವು ನಿರ್ಲಕ್ಷಿಸುವುದಕ್ಕೆ ಆಗುವುದಿಲ್ಲ. 

ಅನುಷ್ಠಾನದ ಕೊರತೆ: ಸರ್ಕಾರಿ ನೀತಿಗಳು ಕಾಗದದ ಮೇಲೆ ಅದ್ಭುತವಾಗಿ ಕಾಣುತ್ತವೆ. ಆದರೆ ಅನುದಾನ ಬಿಡುಗಡೆಯಲ್ಲಿ ಆಗುವ ವಿಳಂಬ, ಅಧಿಕಾರಿಶಾಹಿ ಧೋರಣೆ ಮತ್ತು ರೆಡ್ ಟೇಪಿಸಂ (Red Tapism) ನಿಜವಾದ ಸ್ಟಾರ್ಟಪ್‌ಗಳಿಗೆ ಮುಳುವಾಗುವ ಸಾಧ್ಯತೆ ಹೆಚ್ಚು. ಹಿಂದೆ ಘೋಷಣೆಯಾದ ಎಷ್ಟೋ ಯೋಜನೆಗಳ ಹಣ ಫಲಾನುಭವಿಗಳಿಗೆ ತಲುಪಲು ತಿಂಗಳುಗಟ್ಟಲೆ ಸಮಯ ಹಿಡಿದ ಉದಾಹರಣೆಗಳಿವೆ. ವೇಗವಾಗಿ ಬೆಳೆಯಬೇಕಾದ ಸ್ಟಾರ್ಟಪ್‌ಗಳಿಗೆ ಈ ವಿಳಂಬ ಮಾರಕ. ಅದರಲ್ಲೂ ಸದ್ಯದ ಮಟ್ಟಿಗೆ ಈ ಸರ್ಕಾರ ರೂಪಿಸುವ ಯೋಜನೆಗಳ ಬಗ್ಗೆ ಜನರಲ್ಲಿ ವಿಶ್ವಾಸ  ಕಮ್ಮಿ ಇದೆ. 

ಮೂಲಸೌಕರ್ಯದ ಕೊರತೆ: ಬೆಂಗಳೂರಿನ ಆಚೆಗೆ ಸ್ಟಾರ್ಟಪ್‌ಗಳನ್ನು ಕೊಂಡೊಯ್ಯುವುದು ಒಳ್ಳೆಯದೇ. ಆದರೆ, ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಬೆಂಗಳೂರಿನ ಮಟ್ಟದ ಹೈ-ಸ್ಪೀಡ್ ಇಂಟರ್ನೆಟ್, 24x7 ವಿದ್ಯುತ್ ಮತ್ತು ಮುಖ್ಯವಾಗಿ ಕೌಶಲ್ಯಯುತ ಮಾನವ ಸಂಪನ್ಮೂಲ (Talent Pool) ಲಭ್ಯವಿದೆಯೇ? ಕೇವಲ ಹಣ ಕೊಟ್ಟರೆ ಸಾಲದು, ಅಲ್ಲಿ ಸರಿಯಾದ ಪರಿಸರ ವ್ಯವಸ್ಥೆ (Ecosystem) ನಿರ್ಮಿಸದಿದ್ದರೆ ಈ 75 ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗಬಹುದು. ಅಡಿಪಾಯ ಗಟ್ಟಿ ಮಾಡಿಕೊಳ್ಳದೇ ಮನೆ ಕಟ್ಟುವುದು ಮೂರ್ಖತನವಾಗುತ್ತದೆ.  

ಸಣ್ಣ ಮೊತ್ತದ ಅನುದಾನ: 5 ವರ್ಷಗಳಿಗೆ 518 ಕೋಟಿ ರೂ. ಎಂಬುದು ಕೇಳಲು ದೊಡ್ಡ ಮೊತ್ತ ಎನಿಸಬಹುದು. ಆದರೆ ಜಾಗತಿಕ ಸ್ಟಾರ್ಟಪ್ ವಲಯದಲ್ಲಿ ಇದೊಂದು ಸಣ್ಣ ಮೊತ್ತ. ಒಂದೇ ಒಂದು ಯೂನಿಕಾರ್ನ್ ಕಂಪನಿ ನೂರಾರು ಕೋಟಿ ಬಂಡವಾಳ ಕಬಳಿಸುತ್ತದೆ. ಹೀಗಿರುವಾಗ 25,000 ಸ್ಟಾರ್ಟಪ್‌ಗಳಿಗೆ ಈ ಹಣ ಹಂಚಿದರೆ, ಪ್ರತಿಯೊಬ್ಬರಿಗೂ ಸಿಗುವುದು ಅಲ್ಪ ಮೊತ್ತ ಮಾತ್ರ. ಇದು ದೊಡ್ಡ ಮಟ್ಟದ ಸ್ಕೇಲ್-ಅಪ್ (Scale-up) ಮಾಡಲು ಸಾಕಾಗುವುದಿಲ್ಲ.

ಕರ್ನಾಟಕ ಸರ್ಕಾರದ ಈ ನೀತಿ ಒಂದು ಆಶಾದಾಯಕ ಆರಂಭವೇನೋ ಹೌದು. ಇದು ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಿ, ತಂತ್ರಜ್ಞಾನವನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನದಂತೆಯೂ ಕಾಣುತ್ತಿದೆ. ಆದರೆ, ಇದರ ಯಶಸ್ಸು ಕೇವಲ ಘೋಷಣೆಯಲ್ಲಿಲ್ಲ, ಅದು ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ಮತ್ತು ವೇಗವಾಗಿ ಅರ್ಹ ಸ್ಟಾರ್ಟಪ್‌ಗಳನ್ನು ತಲುಪುತ್ತದೆ ಎಂಬುದರ ಮೇಲೆ ನಿಂತಿದೆ ಎಂಬುದನ್ನುನಾವೆಲ್ಲರೂ ಮನಗಾಣಬೇಕಿದೆ. 

Nagaraj Vaidya
Nagaraj Vaidya
Editor | Tech Vaidya
82

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.